ಪಾಮಸ್ರ್ಟನ್, ಹೆನ್ರಿ ಜಾನ್ ಟೆಂಪಲ್
1784-1865. ಇಂಗ್ಲೀಷ್ ರಾಜನೀತಿಜ್ಞ. 1784ರ ಅಕ್ಟೋಬರ್ 20ರಂದು ರ್ಯಾಮ್‍ಸೆ ಬಳಿಯ ಹ್ಯಾಂಪ್‍ಷೈರ್‍ನಲ್ಲಿ ಜನಿಸಿದ. ಹ್ಯಾರೋದಲ್ಲೂ ಎಡಿನ್‍ಬರೋ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲೂ ಶಿಕ್ಷಣ ಪಡೆದ. ಐರಿಷ್ ಲಾರ್ಡ್ ಪದವಿ ಪಡೆದಿದ್ದುದರಿಂದ ಕಾಮನ್ಸ್ ಸದನದ ಸದಸ್ಯನಾಗಲು ಸಾಧ್ಯವಾಗಿ 1807ರಲ್ಲಿ ಅದಕ್ಕೆ ಚುನಾಯಿತನಾದ ಪಾಮಸ್ರ್ಟನ್ ಬಹುಮಟ್ಟಿಗೆ ಕೊನೆಯವರೆಗೂ ಅದರ ಸದಸ್ಯನಾಗಿದ್ದ. 1807ರಲ್ಲಿ ನೌಕಾದಳದ ಕಿರಿಯ ಲಾರ್ಡ್ ಆದ. ಆದರೆ 1809ರಲ್ಲಿ ಯುದ್ಧಕಾರ್ಯದರ್ಶಿಯಾಗಿ ಸುಮಾರು 20 ವರ್ಷಗಳ ಕಾಲ ಮುಂದುವರಿದ. 46ನೇ ವಯಸ್ಸಿನಲ್ಲಿ, 1830ರಲ್ಲಿ ಲಾರ್ಡ್ ಗ್ರೇ ಸರ್ಕಾರದಲ್ಲಿ ವಿದೇಶಾಂಗ ಸಚಿವನಾದ. 2ನೆಯ ವೈಕೌಂಟ್ ಮೆಲ್ಬೋರ್ನ್ ಮತ್ತು ಲಾರ್ಡ್ ಜಾನ್ ರಸೆಲರ ಸರ್ಕಾರದಲ್ಲಿ (1830-1834, 1835-1841, 1846-1851) ಈ ಅಧಿಕಾರದಲ್ಲಿದ್ದ. 4ನೆಯ ಆರ್ಲ್ ಅಬಕ್‍ಡೀನನ ಸಚಿವ ಸಂಪುಟದಲ್ಲಿ ಗೃಹಸಚಿವನಾಗಿದ್ದ. (1852-1855); ಹಾಗೂ ಎರಡು ಬಾರಿ (1855-1858, 1859-1865) ಪ್ರಧಾನಮಂತ್ರಿಯಾಗಿದ್ದ. 

ಪಾಮಸ್ರ್ಟನ್‍ಗೆ ಪಕ್ಷದ ಹೆಸರುಗಳು ಅಷ್ಟು ಮುಖ್ಯವಾಗಿರಲಿಲ್ಲ. ಮೂಲತಃ ಟೋರಿ ಆದ ಈತ 1826ರಲ್ಲಿ ತನ್ನ ಪಕ್ಷದೊಂದಿಗೆ ಭಿನ್ನಾಭಿಪ್ರಾಯಹೊಂದಿದ್ದರೂ 1828ರಲ್ಲಿ ಮೊದಲನೆಯ ವೆಲ್ಲಿಂಗ್‍ಟನ್ ಡ್ಯೂಕನ ಸಂಪುಟದಲ್ಲಿದ್ದ. ಅನಂತರ ಹ್ವಿಗ್‍ಗಳ ಜೊತೆ ಸೇರಿದ. ಈತ ತಮ್ಮ ಪಕ್ಷಕ್ಕೆ ಸೇರಿದವನೆಂದು ಯಾವುದೇ ಪಕ್ಷದವರು ಹೇಳಿಕೊಳ್ಳಲು ಅವಕಾಶಕೊಡದಷ್ಟು ಮಟ್ಟಿಗೆ ಇವನು ಸ್ವತಂತ್ರ ಮನೋಧರ್ಮದವನಾಗಿದ್ದ.

ಚತುರ, ಸೂಕ್ಷ್ಮಮತಿ ಹಾಗೂ ಧೈರ್ಯವಂತನಾಗಿದ್ದ ಪಾಮಸ್ರ್ಟನ್ ವಿದೇಶಾಂಗ ಸಚಿವನಾಗಿ ತನ್ನ ನಂಬಿಕೆಯಿಂದ ಸ್ಫೂರ್ತಿಗೊಂಡು ಕಲ್ಪನಾಶಕ್ತಿಯ, ಹೊಂದಿಕೊಳ್ಳುವ ಹಾಗೂ ನಿರ್ಭೀತಿಯ ನೀತಿ ತಳೆದ. 
1830-1832ರಲ್ಲಿ ಈತನ ರಾಜ್ಯತಂತ್ರದಿಂದ ಆಧುನಿಕ ಬೆಲ್ಜಿಯಂ ಅಸ್ತಿತ್ವಕ್ಕೆ ಬಂತಲ್ಲದೆ, ಯೂರೋಪಿನ ಯುದ್ಧ ತಪ್ಪಿತು. ಯೂರೋಪಿನ ರಾಜಕಾರಣದಲ್ಲಿ ಇವನು ಕೌಶಲದ ನೀತಿ ಅನುಸರಿಸಿದ. 
ಇವನ ಆಡಳಿತದ ಕೊನೆಯ ದಿನಗಳಲ್ಲಿ ರಾಷ್ಟ್ರದ ರಕ್ಷಣಾಬಲ ವೃದ್ಧಿಹೊಂದಿತು. ಅಮೆರಿಕದ ಅಂತರ್ಯುದ್ಧದ ಸಮಯದಲ್ಲಿ ಬ್ರಿಟನ್ ತಟಸ್ಥ ನೀತಿ ಅನುಸರಿಸುವಂತೆ ಪಾಮಸ್ರ್ಟನ್ ನೋಡಿಕೊಂಡ. ಕಾರ್ಮಿಕ ವರ್ಗಗಳಿಗೆ ಮತಾಧಿಕಾರ ನೀಡುವ ಪ್ರಯತ್ನಗಳ ಬಗ್ಗೆ ಇವನಿಗೆ ಅಷ್ಟೇನು ಉತ್ಸಾಹ ಇರಲಿಲ್ಲ.

ಎಡಿನ್ ಬರೋದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಈತ ಮಾನಸಿಕ ಸ್ವಾತಂತ್ರ್ಯ, ದಯೆ, ಅನುಕಂಪಗಳ ಧೋರಣೆಯ ಉದಾರ ಬೋಧನೆಗಳ ಪ್ರಭಾವಗಳಿಗೆ ಒಳಗಾಗಿದ್ದ. ಹೊಸ ಹೊಸ ಅಭಿಪ್ರಾಯಗಳಲ್ಲಿ ಈತನಿಗೆ ಇದ್ದ ಶಾಶ್ವತವಾದ ಆಸಕ್ತಿಯಿಂದಾಗಿ ತನ್ನ ಅಧಿಕಾರದ ಅವಧಿಯಲ್ಲಿ ಈತ ಅನೇಕ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಗಳನ್ನು ತರಲು ಸಾಧ್ಯವಾಯಿತು. ಈತನನ್ನು ಉದಾರಾವಾದಿಯೆಂದು ಪರಿಗಣಿಸಲಾಗಿತ್ತು. 1865ರ ಅಕ್ಟೋಬರ್ 18ರಂದು ಹ್ಯಾಟ್‍ಫೀಲ್ಡ್ ಬಳಿಯ ಹರ್ಡ್ ಫರ್ಡ್ ಷೈರ್‍ನಲ್ಲಿ ಪಾಮಸ್ರ್ಟನ್ ತೀರಿಕೊಂಡ.
(ಎಂ.ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ